ಆಫ್ರಿಕದ ಭೂ ಇತಿಹಾಸ

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

	ಖಂಡದ ಉತ್ತರ ತಗ್ಗುಪ್ರದೇಶವನ್ನು ಗಣನೆಗೆ ತಾರದಿದ್ದರೆ ಇಡೀ ಖಂಡವನ್ನೇ ಬೃಹತ್ ಪ್ರಸ್ಥಭೂಮಿ ಎನ್ನಬಹುದು. ಇದು ಭೂಚರಿತ್ರೆಯಲ್ಲಿ-ಪ್ರೀಕೇಂಬ್ರಿಯನ್ ಯುಗದಿಂದ ಇಂದಿನವರೆಗೂ ಸಮುದ್ರಗಳಿಂದ ಆವೃತವಾಗಿದ್ದು ಶಾಶ್ವತ ಖಂಡವೆನಿಸಿದೆ. ಈ ಭೂಖಂಡದಲ್ಲಿ ಅತಿ ಪ್ರಾಚೀನ ಆರ್ಕೀಯನ್ ಶಿಲೆಗಳಿಂದ ಹಿಡಿದು ನವೀನ ಯುಗದವರೆಗಿನ ಶಿಲಾಪ್ರಸ್ತರಗಳನ್ನು ನೋಡಬಹುದು. ಅನೇಕ ಭಾಗಗಳಲ್ಲಿ ಆರ್ಕೀಯನ್ ಅಥವಾ ಪ್ರೀಕೇಂಬ್ರಿಯನ್ ಯುಗದ ಶಿಲೆಗಳ ಮೇಲೆ ತೀವ್ರಗತಿಯ ರೂಪಾಂತರಕ್ಕೊಳಗಾದ ಶಿಲಾ ಸಮುದಾಯಗಳನ್ನೂ ಅವುಗಳ ನಡುವೆ ಅಲ್ಲಲ್ಲೇ ಭೂಕಲ್ಪಗಳ ವಿವಿಧ ಯುಗಗಳಲ್ಲಿ ತಲೆದೋರಿದ ಗ್ರಾನೈಟ್ ಅಂತಸ್ಸರಣಗಳನ್ನೂ ಗುರುತಿಸಬಹುದು. ಅಲ್ಲದೆ ಇವುಗಳ ಒತ್ತಟ್ಟಿಗೆ ಸಮುದ್ರಸಂಪರ್ಕವಿಲ್ಲದ ಅಸಂಖ್ಯಾತ ಜಲಜಶಿಲಾಶ್ರೇಣಿಗಳೂ ಕಂಡುಬಂದಿವೆ. ಈ ಶ್ರೇಣಿಗಳ ಹಲಕೆಲವು ಶಿಲಾಪ್ರಸ್ತರಗಳ ಸಂಯೋಜನೆ, ತೀರಪ್ರದೇಶದ ವಿನ್ಯಾಸ ಮತ್ತು ಈ ಶಿಲಾಪ್ರಸ್ತರಗಳಿಗೂ ಅಕ್ಕಪಕ್ಕದ ಭೂಖಂಡಗಳಾದ ದಕ್ಷಿಣ ಅಮೆರಿಕ, ಭಾರತ, ಆಸ್ಟ್ರೇಲಿಯ ಮತ್ತು ಅಂಟಾಕ್ರ್ಟಿಕ್‍ಗಳಲ್ಲಿ ಹರಡಿರುವ ಪೇಲಿಯೊeóÉೂೀಯಿಕ್ ಮತ್ತು ಮೀಸೊಜೋಯಿಕ್ ಯುಗಗಳ ಶಿಲಾ ಸಮುದಾಯಗಳಿಗಿರುವ ಪರಸ್ಪರ ಹೋಲಿಕೆ - ಇವುಗಳ ಆಧಾರದ ಮೇಲೆ ಈಗ ದೂರ ದೂರ ಹರಡಿ ಬೇರೆಯಾಗಿರುವ ಈ ಭೂಖಂಡಗಳೆಲ್ಲವೂ ಕೂಡಿಕೊಂಡು ಭೂ ಇತಿಹಾಸದ ಪರ್ಮೊ-ಕಾರ್ಬಾನಿಫೆರಸ್ ಯುಗದ ತನಕ ಗೊಂಡ್ವಾನಲ್ಯಾಂಡ್ ಎಂಬ ಏಕ ಬೃಹತ್ ಭೂಖಂಡವಾಗಿತ್ತೆಂದು ವಿಜ್ಞಾನಿಗಳು ಊಹಿಸಿದ್ದಾರೆ. ಖಂಡದ ಇಂದಿನ ರೂಪುರೇಖೆ ಬಹುಶಃ ಕ್ರಿಟೇಷಿಯಸ್ ಆದಿಭಾಗದಲ್ಲಿ ಉಂಟಾಯಿತೆಂದು ನಿರ್ಧರಿಸಲಾಗಿದೆ.

	ಖಂಡದ ಭೂ ಇತಿಹಾಸದಲ್ಲಿ ಹಲವಾರು ತೀವ್ರಗತಿಯ ಪರ್ವತಜನ್ಯ ಆಂದೋಳನಗಳೂ ಉಂಟಾಗಿವೆ. ಉತ್ತರದಲ್ಲಿನ ಅಟ್ಲಾಸ್ ಪರ್ವತ ಯೂರೋಪಿನ ಪರ್ವತಗಳೊಡನೆ ಹೆಚ್ಚಿನ ಬಾಂಧವ್ಯವನ್ನು ಹೊಂದಿದ್ದು ಟರ್ಷಿಯರಿ ಯುಗದಲ್ಲಿ ಉದ್ಭವಿಸಿತು. ಆದರೆ ದಕ್ಷಿಣದ ಕೇಪ್ ಪರ್ವತಶ್ರೇಣಿ ಟ್ರಯಾಸಿಕ್ ಯುಗದಲ್ಲಿ ಮೈವೆತ್ತಿತು. ಸಹರ ಮರುಭೂಮಿಯ ಶಿಲೆಗಳಲ್ಲಿ ಪೇಲಿಯೊಜೋಯಿಕ್ ಯುಗದ ಮಡಿಕೆಗಳಿವೆ. ಅಲ್ಲದೆ ಹಲವು ಕಡೆ ಪ್ರೀಕೇಂಬ್ರಿಯನ್ ಯುಗದ ವಿವಿಧ ಹಂತಗಳಲ್ಲಿ ತಲೆದೋರಿದ ಶಿಲಾವಿನ್ಯಾಸಗಳನ್ನು ಗುರುತಿಸಬಹುದು.

	ಅನೇಕ ಭಾಗಗಳಲ್ಲಿ ಬೃಹದಾಕಾರದ ತಗ್ಗುಗಳೂ, ಅವುಗಳ ನಡುವೆ ಅಷ್ಟೇ ದೊಡ್ಡದಾದ ಉಬ್ಬುಗಳೂ ಇವೆ. ಇವುಗಳ ರಚನೆ ಪ್ರೀಕೇಂಬ್ರಿಯನ್ ಯುಗದಲ್ಲಿ ಮೊದಲಾಗಿ ಇತ್ತೀಚಿನವರೆಗೂ ನಡೆದ ಆಧಾರಗಳಿವೆ. ಇವುಗಳಲ್ಲಿನ ಉತ್ತಮ ಉದಾಹರಣೆಗಳು-ಕಾಂಗೊ ತಗ್ಗು, ಕಲಹರಿ ತಗ್ಗು ಮತ್ತು ಛಾಡ್ ತಗ್ಗು, ಈ ತಗ್ಗು ಪ್ರದೇಶಗಳಲ್ಲಿ ಬಹುಮಟ್ಟಿಗೆ ಜಲಜ ಶಿಲಾಶ್ರೇಣಿಗಳನ್ನು ನೋಡಬಹುದು. ಆಫ್ರಿಕ ಖಂಡದ ಮತ್ತೊಂದು ವಿಶಿಷ್ಟ ರೀತಿಯ ಭೂವಿನ್ಯಾಸವೆಂದರೆ - ಭೂಕುಸಿತದಿಂದಾದ ಕಮರಿಗಳು. ಇವು ಉತ್ತರದಲ್ಲಿ ಜೋರ್ಡಾನ್‍ನಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಮೊಸಾಂಬಿಕ್‍ವರೆಗೂ ಹಬ್ಬಿವೆ. ಇವು ವಿವಿಧ ಭೂಯುಗಗಳಲ್ಲಿ ಉಂಟಾಗಿದ್ದರೂ ಇವುಗಳ ಮೇಲೆ ಮಧ್ಯ ಪ್ಲಿಸ್ಟೊಸೀನ್ ಭೂಯುಗದ ಮುದ್ರೆ ಅಚ್ಚಳಿಯದಂತಿದೆ. ಕೆಲವು ಕಮರಿಗಳ ಅಕ್ಕಪಕ್ಕದ ಭೂಪ್ರದೇಶ 3033.33 ಮೀ. ಗಳಿಗೂ ಮೀರಿ ಎತ್ತರವಾಗಿದ್ದು, ಆಳವೂ ಅಷ್ಟೇ ತೀವ್ರಗತಿಯಲ್ಲಿ ಕಂಡುಬಂದಿವೆ. ಕಮರಿಗಳು ಬಹುಮಟ್ಟಿಗೆ ಭೂಭಾಗಗಳ ತುಯ್ತದಿಂದಾದುವೆಂದು ಊಹಿಸಲಾಗಿದೆ.

	ಭೂಚರಿತ್ರೆಯುದ್ದಕ್ಕೂ ಖಂಡದಲ್ಲಿ ಅಗ್ನಿ ಪರ್ವತಗಳ ಚಟುವಟಿಕೆಯನ್ನು ಕಾಣಬಹುದು. ಇವುಗಳಿಂದ ಹೊರಬಂದ ಅಗ್ನಿಶಿಲಾ ಶ್ರೇಣಿಗಳಲ್ಲಿ ಕಾರೂ ಶಿಲಾಶ್ರೇಣಿ ಬಹು ಮುಖ್ಯವಾದದ್ದು. ಇದರ ಒಟ್ಟು ಮಂದ 8797 ಮೀ, ವಿಸ್ತೀರ್ಣ 5,000-1,00,000 ಘನ (ಕ್ಯೂಬಿಕ್) ಮೈಲಿಗಳೆಂದೂ ಪ್ರಸಿದ್ಧ ಭೂವಿಜ್ಞಾನಿ ಎ.ಎಲ್.ಡ್ಯೂ ಟಾ ಅಂದಾಜು ಮಾಡಿದ್ದಾನೆ, ಹೀಗೆಯೆ ಕಲ್ಟಿನಿಯ ಮತ್ತು ಹೋಪ್ ಟೌನ್ ಪ್ರದೇಶಗಳಲ್ಲಿ 12900 ಚ.ಕಿ.ಮೀಗಳಿಗೂ ವಿಸ್ತಾರವಾದ ಡಾಲರೈಟ್ ಹಾಳೆಗಳಿವೆ. ಅಲ್ಲದೆ ಕೆನ್ಯರಾಜ್ಯದ ಮಧ್ಯ ಟರ್ಷಿಯರಿ ಯುಗದ ಫೊನೋಲೈಟ್ ಲಾವಾ ಪ್ರಸ್ತರಗಳೂ ಬಹುಪ್ರಸಿದ್ಧಿ. ಇಷ್ಟೇ ಅಲ್ಲದೆ ಭೂಕಮರಿಗಳ ಅಕ್ಕಪಕ್ಕದ ಪ್ರದೇಶಗಳಲ್ಲೂ ಅಗ್ನಿಪರ್ವತಗಳ ಕಾರ್ಯಾಚರಣೆ ವ್ಯಕ್ತವಾಗಿದೆ. ಕೆನ್ಯ ಶಿಖರ, ಕಿಲಿಮಂಜಾರೊ ಶಿಖರ ಇತ್ಯಾದಿಗಳೆಲ್ಲವೂ ಲುಪ್ತ ಜ್ವಾಲಾಮುಖಿಗಳು. ಹೀಗೆಯೆ ಈಚಿನ ವರ್ಷಗಳಲ್ಲಿ (1931-40) ಟಾನ್‍ಜೇನಿಯದ ಲೆಂಗೈ, ಕಾಂಗೊನ ನ್ಯಾಮ್ಲಾಗಿರ ಮತ್ತು ನರಗೊಂಗೊ ಅಗ್ನಿಪರ್ವತಗಳನ್ನೂ ಉದಾಹರಿಸಬಹುದು. ಇವುಗಳ ಮೂಲಕ ಅಗಾಧ ಪ್ರಮಾಣದಲ್ಲಿ ಬೆಸಾಲ್ಟ್ ಲಾವಾ ಪ್ರವಾಹಗಳು ಹೊರಬಂದವು. ಉತ್ತರ ಆಫ್ರಿಕದ ಕ್ಯಾಮರೂನ್ ಎಮಿಕೌಸಿ ಮತ್ತು ಟಿಬೆಸ್ಟಿಗಳಲ್ಲೂ ಅಗ್ನಿಪರ್ವತಗಳ ಚಟುವಟಿಕೆಗಳಿಗೆ ಸಂಬಂಧಿಸಿದ ಕುರುಹುಗಳಿವೆ.

	ಖಂಡದ ಪ್ರೀಕೇಂಬ್ರಿಯನ್ ಯುಗದ ಶಿಲೆಗಳಲ್ಲಿ ಜೀವ್ಯವಶೇಷಗಳಿಲ್ಲ. ಆದರೆ ವಿದ್ಯುತ್ ವಿಕಿರಣ ವಿಧಾನಗಳಿಂದ ಆ ಶಿಲೆಗಳ ಕೆಲವು ಖನಿಜಗಳ ವಯಸ್ಸನ್ನು ಅಳೆದು ನಿರ್ಧರಿಸಲಾಗಿದೆ. ಈ ದಿಸೆಯಲ್ಲಿ ಆರ್ಥರ್ ಹೋಮ್ಸ್ ಮತ್ತು ಎಲ್. ಕಾಹೆನ್ ಅವರು ಅಮೋಘ ಸಂಶೋಧನೆಗಳನ್ನು ನಡೆಸಿದ್ದಾರೆ. ಅಲ್ಲದೆ ಯುಗದಲ್ಲಿ ಏಳು ವಿವಿಧ ಹಂತಗಳನ್ನೂ ಗುರುತಿಸಿದ್ದಾರೆ. ಶಿಲೆಗಳ ಅತ್ಯಂತ ಹೆಚ್ಚಿನ ವಯಸ್ಸು 3,000,000,000 ವರ್ಷಗಳು ಮತ್ತು ಕನಿಷ್ಠ ವಯಸ್ಸು 630,000,000 ವರ್ಷಗಳು.

	ಆಫ್ರಿಕದ ಸುಮಾರು ಮೂರನೆ ಒಂದು ಭೂಪ್ರದೇಶ ಆರ್ಕೀಯನ್ ಯುಗದ ಪದರುಶಿಲೆಗಳಿಂದಲೂ ಗೀರುಶಿಲೆಗಳಿಂದಲೂ ಆವೃತವಾಗಿದೆ. ಇವುಗಳನ್ನು ಅನೇಕ ಕಡೆ ತೂರಿಕೊಂಡು ಭೂಯುಗದ ವಿವಿಧಕಾಲಗಳಲ್ಲಿ ಗ್ರಾನೈಟ್ ಹೊರಬಂದಿದೆ. ಶಿಲಾಸಮೂಹ ಅನೇಕ ಕಡೆ ವಿವಿಧ ರೀತಿಯಲ್ಲಿ ಸವೆದುಹೋಗಿದೆ. ಅಲ್ಲದೆ ಉತ್ತಮ ದರ್ಜೆಯ ಖನಿಜ ನಿಕ್ಷೇಪಗಳಿಗೆ ತೌರೆನಿಸಿದೆ. ಉದಾ. 9100ಮೀ ಮಂದವಾದ ಬುಲವಾಯನ್ ಶಿಲಾಶ್ರೇಣಿ ಚಿನ್ನದ ನಿಕ್ಷೇಪಗಳಿಗೆ ಹೆಸರುವಾಸಿ. ಅಲ್ಲದೆ ಈಜಿಪ್ಟ್, ಸುಡಾನ್, ಘಾನ, ನ್ಶೆಜೀರಿಯ, ಕ್ಯಾಮರೊನ್ ಪ್ರಾಂತ್ಯಗಳಲ್ಲಿ ಹರಡಿರುವ ಆರ್ಕೀಯನ್ ಶಿಲೆಗಳಲ್ಲಿ ಚಿನ್ನ, ಬೆಳ್ಳಿ, ತಾಮ್ರ, ಸತು, ಕ್ರೋಮೈಟ್, ಬೆರಿಲ್, ಕಲ್ನಾರು, ಅಭ್ರಕ ಮತ್ತು ಇತರ ಅಪೂರ್ವ ಖನಿಜಗಳಿವೆ.

	ಉತ್ತಮ ಶಿಲಾಶ್ರೇಣಿಗಳಿರುವ ಕಡೆ ಅದನ್ನು ವಿಶೇಷವಾಗಿ ಅಧ್ಯಯನಮಾಡಿ ವಯೋಗುಣಕ್ಕನುಸಾರವಾಗಿ ವರ್ಗೀಕರಿಸಲಾಗಿದೆ. ಉದಾ. ಪೂರ್ವ ಆಫ್ರಿಕದ ಆರ್ಕೀಯನ್ ಶಿಲಾಸಮೂಹವನ್ನು ಬೇಸ್‍ಮೆಂಟ್, ನ್ಯಾನ್‍ಜಿಯನ್ ಮತ್ತು ಕವಿರಾಂಡಿಯನ್ ಎಂದು ವಿಭಜಿಸಲಾಗಿದೆ. ಹೀಗೆಯೇ ದಕ್ಷಿಣ ಆಫ್ರಿಕದ ವಿಟ್‍ವಾಟರ್ಸ್ ರ್ಯಾಂಡ್ ಮತ್ತು ಟ್ರಾನ್ಸ್‍ವಾಲ್ ಪ್ರದೇಶಗಳ ಆದಿ ಪ್ರೀಕೇಂಬ್ರಿಯನ್ ಶಿಲೆಗಳನ್ನು ಹಿರಿಯ ಮತ್ತು ಕಿರಿಯ ಉಪವರ್ಗಗಳಾಗಿ ವಿಂಗಡಿಸಲಾಗಿದೆ. ಹಿರಿಯ ಶ್ರೇಣಿಯಲ್ಲಿ ಪ್ರಪಂಚದಲ್ಲೇ ಅತಿ ಶ್ರೇಷ್ಠ ದರ್ಜೆಯ ಚಿನ್ನದ ಅದುರಿನ ನಿಕ್ಷೇಪಗಳೂ ಕಿರಿಯ ಶ್ರೇಣಿಯಲ್ಲಿ ಬುಷ್‍ವೆಲ್ಡ್ ಶಿಲಾಸಮೂಹವೂ ಇವೆ. ಈ ಶಿಲಸಮೂಹದಲ್ಲಿ ದೊರೆವ ಕ್ರೋಮೈಟ್, ನಿಕಲ್ ಮತ್ತು ಪ್ಲಾಟಿನಂ ಅದುರುಗಳು ಲೋಕ ಪ್ರಸಿದ್ಧ.

	ಆದಿ ಪೇಲಿಯೊಜೋಯಿಕ್ ಕಲ್ಪದ ಶಿಲೆಗಳು ಇಡೀ ಆಫ್ರಿಕಾದಲ್ಲೆ ಅಪೂರ್ವ. ಉತ್ತರದ ಮೊರಾಕೊನಲ್ಲಿ ಕೇಂಬ್ರಿಯನ್ ಶಿಲಾ ಪ್ರಸ್ತರಗಳೂ ಸಹರ ಪ್ರದೇಶದಲ್ಲಿ ಆರ್ಡೊವೀಶಿಯನ್ ಪ್ರಸ್ತರಗಳೂ ಇವೆ. ಅಲ್ಲದೆ ಅಲ್ಲಲ್ಲಿ ಸೈಲೂರಿಯನ್ ಯುಗದ ಶಿಲೆಗಳೂ ಹರಡಿವೆ. ಇವುಗಳಲ್ಲಿ ಬ್ರೇಕಿಯೋಪಾಡ್‍ನ ಚಿಪ್ಪ್ಪುಗಳೂ ಮತ್ತು ಕ್ರೈನಾಡ್ ಅವಶೇಷಗಳು ಹುದುಗಿವೆ. ಇದೇ ಯುಗದ ಕೆಂಪು ಮರಳು ಶಿಲೆ ಮತ್ತು ಪೆಂಟೆಶಿಲೆ ದಕ್ಷಿಣ ಆಫ್ರಿಕ, ಕಾಂಗೊ ಮತ್ತು ಟಾನ್‍ಜೇನಿಯ ಪ್ರಾಂತ್ಯಗಳುದ್ದಕ್ಕೂ ಹರಡಿವೆ. ಟಾನ್‍ಜೇನಿಯದ ಜಲಜ ಶಿಲೆಗಳಲ್ಲಿ ಮೀನು ಶಲ್ಕಗಳು ಏಡಿ, ಸ್ಪಂಜು ಮತ್ತು ರೇಡಿಯೊಲೇರಿಯ ಮುಂತಾದ ಅಸಂಖ್ಯಾತ ಜೀವ್ಯವಶೇಷಗಳಿವೆ. ಈ ಶಿಲಾ ಪ್ರಸ್ತರಗಳೂ ಕಾಂಗೊ ಮತ್ತು ಕೇಪ್ ಪ್ರಾಂತ್ಯಗಳಲ್ಲಿ ತೀವ್ರಗತಿಯಲ್ಲಿ ಉಂಟಾದ ಭೂಚಟುವಟಿಕೆಗಳಿಗೆ ಒಳಗಾಗಿ ಮಡಿಕೆ ಬಿದ್ದಿವೆ.

	ಡಿವೋನಿಯನ್ ಶಿಲಾಪ್ರಸ್ತರಗಳಲ್ಲೂ ಅಸಂಖ್ಯಾತ ಅವಶೇಷಗಳನ್ನು ಕಾಣಬಹುದು. ಈ ಯುಗದ ಬೊಕೆವಾಲ್ಡ್ ಶಿಲಾಶ್ರೇಣಿ ದಕ್ಷಿಣ ಕೇಪ್ ಸಹರ ಲಿಬಿಯ ಮತ್ತು ಪಶ್ಚಿಮ ಸೂಡಾನಗಳಲ್ಲಿ ಹಬ್ಬಿದೆ. ಘಾನ ತೀರಪ್ರದೇಶದಲ್ಲಿ ಇದೇ ಯುಗದ ಕೆಳ, ಮಧ್ಯಮ ಮತ್ತು ಮೇಲಿನ ಉಪವರ್ಗಗಳನ್ನು ನೋಡಬಹುದು.

	ಉತ್ತರ ಆಫ್ರಿಕದಲ್ಲಿ ಕಾರ್ಬಾನಿಫೆರಸ್ ಯುಗದ ಶಿಲಾಪ್ರಸ್ತರಗಳು ಹೇರಳವಾಗಿವೆ. ಇವು ಬಹುಮಟ್ಟಿಗೆ ನೆಲ ಭಾಗಗಳಿಗೆ ಸಂಬಂಧಿಸಿದುವು (ಕಾಂಟಿನೆಂಟಲ್). ಛಾದ್ ಮತ್ತು ಲಿಬಿಯ - ಈಜಿಪ್ಟ್ - ಸೂಡಾನ್ ಗಡಿ ಪ್ರದೇಶದ ಮಧ್ಯೆಯಿರುವ ಈ ಯುಗದ ಶಿಲೆಗಳಲ್ಲಿ ಲೆಪಿಡೊಡೆನ್‍ಡ್ರಾನ್ ಸ್ಟಿಗ್ಮೇರಿಯಾ ಮತ್ತು ಆರ್ಕೀಯೋ ಸಿಜಿಲೇರಿಯಾ ಮುಂತಾದ ಸಸ್ಯಾವಶೇಷಗಳೂ ಇತರ ಜೀವ್ಯವಶೇಷಗಳೂ ಇವೆ.

	ಮಧ್ಯ ಮತ್ತು ದಕ್ಷಿಣ ಆಫ್ರಿಕದಲ್ಲಿ ಕಾರೊ ಶಿಲಾ ಶ್ರೇಣಿಯನ್ನು ಅನೇಕ ಕಡೆ ನೋಡಬಹುದು. ಶ್ರೇಣಿಯ ಅತಿ ಕೆಳಗಿನ ಪ್ರಸ್ತರಗಳೆಂದರೆ ಕಾರ್ಬಾನಿಫೆರಸ್ ಯುಗದ ಹಿಮ ನದಿಯ ಡ್ವೈಕಾ ಟಿಲ್ಲೈಟ್ ಶಿಲಾ ಪ್ರಸ್ತರಗಳು. ಇವು ಕೇಪ್ ಪ್ರಾಂತ್ಯದಲ್ಲಿ 607 ಮೀ. ಮಂದವಾಗಿದ್ದು ಬಹು ಪ್ರಖ್ಯಾತವಾಗಿವೆ. ಉತ್ತರಕ್ಕೆ ಸರಿದಂತೆಲ್ಲ ತೆಳುವಾಗುತ್ತ ಕಡೆಕಡೆಗೆ ಕಾಂಗೊ ಮತ್ತು ಮಡಗಾಸ್ಕರ್‍ಗಳಲ್ಲಿ ಚದುರಿಹೋಗಿವೆ.

	ಪರ್ಮಿಯನ್ ಯುಗದ ಎಕ್ಕಾ ಶಿಲಾ ಪ್ರಸ್ತರಗಳನ್ನು ದಕ್ಷಿಣ ಆಫ್ರಿಕ, ರೊಡೀಷಿಯ ಮತ್ತು ತ್ಯಾಂಗನೀಕಗಳಲ್ಲಿ ನೋಡಬಹುದು. ಉತ್ತಮ ದರ್ಜೆಯ ಕಲ್ಲಿದ್ದಲಿನ ನಿಕ್ಷೇಪಗಳಿಗೆ ಇವು ಹೆಸರುವಾಸಿ. ಇವುಗಳಲ್ಲಿ ಗ್ಲಾಸಾಪ್ಟೆರಸ್ ಎಂಬ ಸಸ್ಯಾವಶೇಷವನ್ನು ನೋಡಬಹುದು. ಕೇಪ್ ಪ್ರಾಂತ್ಯದ ಟ್ರಯಾಸಿಕ್ ಯುಗದ ಬ್ಯೂಫರ್ಟ್ ಶಿಲಾ ಪ್ರಸ್ತರಗಳಲ್ಲಿ ಸರೀಸೃಪಗಳ ಪಳೆಯುಳಿಕೆಗಳಿವೆ. ಈ ಪ್ರಸ್ತರಗಳನ್ನು ಕಾಂಗೊನಲ್ಲಿ ಲ್ಯುಕುಗಾ ಶಿಲಾಪ್ರಸ್ತರಗಳೆನ್ನುತ್ತಾರೆ. ಕಾರೂ ಶಿಲಾಶ್ರೇಣಿ ವಾಯುನಿಕ್ಷೇಪಗಳಾದ (ಇಯೋಲಿಯನ್) ಮರಳು ಶಿಲೆಗಳಲ್ಲಿ ಅಂತ್ಯಗೊಳ್ಳುತ್ತದೆ. ಇದಾದ ಅನಂತರ ಬೆಸಾಲ್ಟ್ ಲಾವಾಗಳ ಹೊರ ಹೊಮ್ಮುವಿಕೆ ಪ್ರಾಂರಂಭವಾಯಿತು. ಈ ಲಾವಾ ಪ್ರಸ್ತರಗಳು ಡ್ರೇಕನ್ಸ್‍ಬರ್ಗ್‍ನಲ್ಲಿ 1365 ಮೀ. ಮೀರಿ ಮಂದವಾಗಿವೆ. ಇವುಗಳ ನಿಕಟವರ್ತಿಯಾದ ಶಿಲಾ ಒಡ್ಡುಗಳೂ ಮತ್ತು ಸಿಲ್‍ಗಳೂ ಅಸಂಖ್ಯಾತವಾಗಿವೆ.

	ಜೂರಾಸಿಕ್ ಯುಗದ ಶಿಲಾಪ್ರಸ್ತರಗಳು ಈ ಖಂಡದಲ್ಲಿ ಅಷ್ಟಾಗಿ ಕಂಡುಬಂದಿಲ್ಲ. ಕಾಂಗೋ ರಾಜ್ಯಕ್ಕೆ ಮಾತ್ರ ಸೀಮಿತಗೊಂಡಿವೆ. ಈ ಭೂಯುಗದಲ್ಲಿ ಖಂಡದ ಬಹುತೇಕ ಭಾಗ ಮೈದಾನ ಪ್ರದೇಶವಾಗಿ ಪರಿವರ್ತಿತವಾಯಿತು. ಬಹುಶಃ ಏಕ ಖಂಡವಾದ ಗೊಂಡ್ವಾನ ಸಹ ಒಡೆದು ಛಿದ್ರವಾಗಲು ಪ್ರಾರಂಭವಾಯಿತೆನ್ನಬಹುದು. ಈ ಕಾಲದಲ್ಲಿ ಮಡಗಾಸ್ಕರ್ ಮೂಲ ಖಂಡದಿಂದ ದೂರ ಸರಿಯಿತು. ಮುಂದೆ ಕ್ರಿಟೇಷಿಯಸ್ ಯುಗದ ವೇಳೆಗೆ ಖಂಡಕ್ಕೆ ಈಚೆಗಿನ ರೂಪರೇಖೆ ಬಂದಿತೆನ್ನಬಹುದು. ಈ ಯುಗದ ಪ್ರಾಣಿಗಳ ಅವಶೇಷಗಳನ್ನು ಖಂಡದ ಪೂರ್ವತೀರ ಪ್ರದೇಶಗಳಲ್ಲಿನ ಶಿಲಾಪ್ರಸ್ತರಗಳಲ್ಲಿ ನೋಡಬಹುದು. ಅದರಲ್ಲೂ ಈ ಯುಗದ ನಿಯೊಕೋಮಿಯನ್ ಮತ್ತು ಸಿನೋನಿಯನ್ ಪ್ರಸ್ತರಗಳು ಉತ್ತಮರೀತಿಯಲ್ಲಿ ಕಂಡುಬಂದಿವೆ. ಇದೇ ಯುಗದ ಸಿನೊಮೇನಿಯನ್ ಸಮುದ್ರ ಪಶ್ಚಿಮ ಆಫ್ರಿಕ, ಟ್ಯುನಿಸ್, ಮೊರಾಕೊ ಈ ಪ್ರಾಂತ್ಯಗಳನ್ನೆಲ್ಲ ಆವರಿಸಿತ್ತು. ಉತ್ತಮ ಸುಣ್ಣಶಿಲಾ ನಿಕ್ಷೇಪಗಳೂ ರೂಪಗೊಂಡುವು.

	ಕ್ರಿಟೇಷಿಯಸ್ ಯುಗವಾದ ಮೇಲೆ ಸಮುದ್ರ ಕ್ರಮೇಣ ತನ್ನ ವಿಸ್ತೀರ್ಣದಲ್ಲಿ ಕುಗ್ಗುತ್ತ ಇಯೊಸೀನ್ ಕಾಲದಲ್ಲಿ ಸಣ್ಣಪುಟ್ಟ ಜಲಾಶಯಗಳಂತೆ ಪರಿವರ್ತಿತವಾಯಿತು. ಉದಾ : ನೈಲ್‍ಕಣಿವೆ ಕೇಂದ್ರ ಲಿಬಿಯ, ಸೈಜರ್‍ಕಣಿವೆ - ಇಲ್ಲೆಲ್ಲ ಜಲಜ ಶಿಲೆಗಳು ಶೇಖರವಾಗಲು ಮೊದಲಾಯಿತು. ಮುಂದೆ ಈ ಪ್ರದೇಶಗಳಲ್ಲೆ ಟರ್ಷಿಯರಿ ಮತ್ತು ಕ್ವಾಟರ್ನರಿ ಶಿಲಾಪ್ರಸ್ತರಗಳೂ ನಿಕ್ಷೇಪವಾದುವು. ಛಾದ್ ಮುಂತಾದ ಕಡೆ ಉಂಟಾದ ಇಳುಕುಗಳಲ್ಲಿ ನಿಕ್ಷೇಪವಾದ ಶಿಲಾಪ್ರಸ್ತರಗಳಲ್ಲಿ ಆಯಾ ಭೂಕಾಲದ ಜೀವಾವಶೇಷಗಳು ಹುದುಗಿವೆ. ಅದರಲ್ಲೂ ಬಹು ಮುಖ್ಯವಾದುದು ಈಜಿಪ್ಟಿನ ಫಯ್ಯಾಂಶ್ರೇಣಿಗೆ ಸೇರಿದ ಪ್ರಸ್ತರಗಳು. ಇವುಗಳಲ್ಲಿ ಗತಕಾಲದ ಆನೆ ಮತ್ತು ಕಪಿಗಳ ಅವಶೇಷಗಳಿವೆ.

	ಪಶ್ಚಿಮ ಸಹರದಲ್ಲಿ ಇಯೊಸೀನ್ ಕಾಲದ ಸಮುದ್ರವಿರಲಿಲ್ಲ. ಈ ಕಾಲದಲ್ಲೇ ಟೆಥಿಯನ್ ಬೃಹದ್ ಇಳಕಲಿನ (ಜಿಯೊಸಿಂಕ್ಲೈನ್) ಜಲಜಶಿಲೆಗಳಿಂದ ಉದ್ಭವಗೊಂಡ ಅಟ್ಲಾಸ್ ಪರ್ವತಗಳ ಮೊದಲ ಹಂತವೂ ಪ್ರಾರಂಭವಾಯಿತು. ಮಯೊಸೀನ್ ಸಮುದ್ರ ಆಲ್ಜಿರಿಯಕ್ಕೆ ಮಾತ್ರ ಸೀಮಿತವಾಗಿತ್ತು. ಪ್ಲಿಯೊಸೀನ್ ಕಾಲದ ಸಮುದ್ರವಂತೂ ಇನ್ನೂ ಚಿಕ್ಕದು. ಹೀಗಾಗಿ ಉತ್ತರ ಆಫ್ರಿಕದ ಬಹುಭಾಗ ಭೂಖಂಡವಾಗಿಯೇ ಉಳಿಯಿತು.

	ಟರ್ಷಿಯರಿ ಯುಗದ ಪ್ರಸ್ತರಗಳು ಬಹುಮಟ್ಟಿಗೆ ಖಂಡದ ಪೂರ್ವ ದಕ್ಷಿಣ ಮತ್ತು ಪಶ್ಚಿಮ ತೀರಪ್ರದೇಶಗಳಲ್ಲಿ ಕಂಡುಬಂದಿದೆ. ದಕ್ಷಿಣ ಆಫ್ರಿಕದ ಪ್ಲಿಯೊಸೀನ್ ಕಾಲದ ಗುಹಾನಿಕ್ಷೇಪಗಳು ಮಾನವ ಪೂರ್ವಜರ ಗುಂಪಿನ ಆಸ್ಟ್ರಲೋ - ಪಿಥಿಕಸ್ ಎಂಬ ನರವಾನರ ಅವಶೇಷಗಳನ್ನು ಹೊಂದಿದ್ದು ಜೀವ ವಿಕಾಸದ ಅಧ್ಯಯನದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿವೆ. ಅದರಲ್ಲೂ ಟಾನ್‍ಜೇನಿಯದ ಓಲ್ಡುವೈ ಇಳಕಲಿನ ಮೆಕ್ಕಲು ಪ್ರದೇಶ ಈ ಅವಶೇಷಗಳಿಗೆ ಬಹು ಹೆಸರುವಾಸಿ. ಅಲ್ಲದೆ ಖಂಡದುದ್ದಕ್ಕೂ ಕಂಡುಬರುವ ಪ್ಲಿಸ್ಟೊಸೀನ್ ನಿಕ್ಷೇಪಗಳಲ್ಲಿ ಶಿಲಾಯುಗದ ಉಪಕರಣಗಳನ್ನು ಮತ್ತು ಆದಿಮಾನವನಿಗೆ ಸಂಬಂಧಿಸಿದ ಇತರ ಕುರುಹುಗಳನ್ನೂ ಗುರುತಿಸಬಹುದು.
(ಬಿ.ವಿ.ಜಿ.)